ಏಕೋರಾಮ ಸಿದ್ಧ: 1120. ಪುರ್ವೋತ್ತರ ಮೀಮಾಂಸೆ, ತರ್ಕ, ವ್ಯಾಕರಣ ಶಾಸ್ತ್ರಗಳಲ್ಲಿ ನಿಪುಣನಾದ ಶಿವಾಚಾರ್ಯ. ಏಕೋರಾಮಸಿದ್ಧ ಭಗವತ್ಪಾದ ತನ್ನ ಗುರುವೆಂದು ಶ್ರೀಪತಿ ಪಂಡಿತ (1120) ತನ್ನ ಶ್ರೀಕರಭಾಷ್ಯದ ಪ್ರಾರಂಭದಲ್ಲಿ ಹೊಗಳಿದ್ದಾನೆ. ಈ ಗುರು ಶಿಷ್ಯ ಸಂಬಂಧ ನಿಜವಿರಬೇಕು. ಮೇಲಾಗಿ ಶ್ರೀಪತಿ ಪಂಡಿತ ಶ್ರೀಶೈಲ ಪೀಠಾಧಿಪತಿಗಳಾಗಿದ್ದ ವಿರೂಪಾಕ್ಷದೇಶಿಕೇಂದ್ರರಿಂದ ಲಿಂಗದೀಕ್ಷೆಯನ್ನು ಕಾಶಿಯಲ್ಲಿ ಪಡೆದ ಆರಾಧ್ಯಬ್ರಾಹ್ಮಣನೆಂದು ಪುಲ್ಲಕವಿಕೃತ ಶ್ರೀಶೈಲ ಪಂಡಿತಾರಾಧ್ಯ ಚರಿತ್ರದಲ್ಲಿ ಹೇಳಿದೆ. ಈ ವಿರೂಪಾಕ್ಷದೇಶಿಕ  ದೇವರದಾಸಿಮಯ್ಯನಿಗೆ (1100) ಶಿವದೀಕ್ಷೆ ನೀಡಿದ ಚಂದ್ರಗುಂಡದೇಶಿಕೇಂದ್ರರ ಗುರು. ಈ ಕಾರಣಗಳಿಂದ ಶ್ರೀಪತಿಪಂಡಿತನ ಶ್ರೀಕರಭಾಷೋಕ್ತ ಏಕೋರಾಮಸಿದ್ಧ ಮತ್ತು ಶ್ರೀಶೈಲದ ವಿರೂಪಾಕ್ಷ ದೇಶಿಕೇಂದ್ರ-ಇವರು ಒಬ್ಬನೇ ಆಗಿದ್ದ ಪಕ್ಷದಲ್ಲಿ ಈ ಏಕೋರಾಮ ಆದಯ್ಯನ ವಚನಗಳಲ್ಲಿ ಹೇಳಿರುವ ರೇವಣಸಿದ್ಧನ ಶಿಷ್ಯನಾದ ಮರುಳಸಿದ್ಧನ ಶಿಷ್ಯ ಏಕೋರಾಮನಿರಬಹುದು. ಶ್ರೀಕರಭಾಷ್ಯದಲ್ಲಿ ಈತನನ್ನು ದೇಶಿಕೇಂದ್ರ ಎಂದು ಹೇಳಿರುವುದು ಇದಕ್ಕೆ ಪೋಷಕ. ಆಗ ಏಕೋರಾಮ ಎಂಬ ಹೆಸರು ಶ್ರೀಕರಭಾಷ್ಯದ ಉಲ್ಲೇಖದಂತೆ  ವಿರೂಪಾಕ್ಷದೇಶಿಕರ ಅನ್ವರ್ಥಕನಾಮವಿರಬೇಕೆನಿಸುತ್ತದೆ. ಅಂತೂ ಈತ ಕೇದಾರ ಪೀಠಾಚಾರ್ಯ ಏಕೋರಾಮನಿಗಿಂತ ಭಿನ್ನ.                   			          (ಎಂ.ಜಿ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ